ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಅಗರಿ ರಘುರಾಮ ಭಾಗವತರ ನೆನಪುಗಳು

ಲೇಖಕರು :
ಸದಾನಂದ ಹೆಗಡೆ ಹರಗಿ
ಗುರುವಾರ, ಆಗಸ್ಟ್ 1 , 2013

ಅಪ್ಪ ಕಲಿಸಿದ ಮೊದಲ ಪಾಠ

ಸುಮಾರು 60 ವರ್ಷಗಳ ಹಿಂದೆ ಜಗಲಿಯಲ್ಲಿ ನಡೆದ ತಾಳಮದ್ದಳೆಯೊಂದರ ದೃಶ್ಯ ಕಲ್ಪಸಿಕೊಳ್ಳಿ.

ಭಾರವಾಯಿತು ಗಧೆ. ಧೈರ್ಯ ಹಿಂಗೊಳಿಸಿತು..ಕೌರವಾದ್ಯರ ಕೊಲ್ಲಲಾರೆ.. ಎಂದು ಹೇಳುವ ಪದ್ಯವೊಂದು ಕೃಷ್ಣ ಸಂಧಾನ ಪ್ರಸಂಗದಲ್ಲಿ ಬರುತ್ತದೆ. ಬಹು ಪ್ರದರ್ಶಿತ ಯಕ್ಷಗಾನಗಳಲ್ಲಿ ಒಂದಾದ ಕೃಷ್ಣ ಸಂಧಾನದ ಈ ಪದ್ಯ ವಿಷಾದ ಯೋಗದ ಭೀಮನ ಅಭಿವ್ಯಕ್ತಿಯಾಗಿ ಬರುವಂಥ ಪದ್ಯ.

ರಾಜ್ಯಭ್ರಷ್ಟರಾಗಿ ವಸವಾಸ ಮುಗಿಸಿ ಬರುವ ಪಾಂಡವರು ಧರ್ಮರಾಯನ ಆಶಯದಂತೆ ಕೌರವ-ಪಾಂಡವರ ನಡುವಿನ ವ್ಯಾಜ್ಯಕ್ಕೆ ಶ್ರೀ ಕೃಷ್ಣನನ್ನು ಸಂಧಾನಕಾರನಾಗಿ ಕಳುಹಿಸುವ ಸಂದರ್ಭ. ತುಂಬಿದ ಸಭೆಯಲ್ಲಿ ಸೀರೆ ಎಳೆದು ಮಾನ ಕಳೆಯಲು ಪ್ರಯತ್ನಿಸದ ಕೌರವರೊಂದಿಗೆ ಮತ್ತೆ ಸಂಧಾನ ಎಂಬುದು ದ್ರೌಪದಿಗೆ ಸ್ವಲ್ಪವೂ ಸರಿ ಕಾಣುವುದಿಲ್ಲ. ಪಾಂಡವರಲ್ಲಿ ತನಗೆ ಅತ್ಯಂತ ಇನಿಯನಾದ ಭೀಮನಲ್ಲಿ ತನ್ನ ಮನದಾಳ ಹೇಳಿ, ಸಂಧಾನದ ವಿರುದ್ಧ ಭೂಮಿಕೆಯನ್ನು ಬಿತ್ತಲು ಪ್ರಯತ್ನಿಸುವ ಸನ್ನಿವೇಶ ತಾಳಮದ್ದಳೆ ವೀಕ್ಷರಿಗೆ ಹೊಸದಲ್ಲ.ಅದೊಂದು ವಿಶಿಷ್ಟ ದಾಂಪ್ಯ ಗೀತೆಯೂ ಹೌದು.

ಅಗರಿ ರಘುರಾಮ ಭಾಗವತ
ಆರಂಭದಲ್ಲಿ ಭೀಮನೂ ಯುದ್ಧದ ಬಗ್ಗೆ ಉತ್ಸಾಹ ತೋರುವುದಿಲ್ಲ. ತನಗೆ ಜೀವನದಲ್ಲಿ ಕಷ್ಟ ಕಾರ್ಪಣ್ಯ ಕಂಡು ಸಾಕಾಗಿ ಹೋಗಿದೆ..ಮತ್ತೆ ಮತ್ತೆ ಯುದ್ಧದ ಬಗ್ಗೆ ಮಾತಾಡಬೇಡ.. ವನವಾಸದಲ್ಲಂತೂ ಒಂದು ದಿನವೂ ಹೊಟ್ಟೆ ತುಂಬ ಉಣ್ಣುವುದು ಸಾಧ್ಯವಾಗಲಿಲ್ಲ. ಎಲ್ಲರೂ ಒಪ್ಪಿದರೆ, ಸಂಧಾನವಾದರೆ ಏನು ಸಮಸ್ಯೆ ಎಂದಾಗ ಸಿಟ್ಟಿಗೇಳುವ ದ್ರೌಪದಿ ಎದುರು ವಿಷಾದದಲ್ಲಿ ತನ್ನ ಜೀವನದ ನೋವನ್ನು ಹೇಳುವ ಸನ್ನಿವೇಶ ಅದು.

ಈ ಹಾಡನ್ನು ಅಂದು ಯುವಕ ಅಗರಿ ರಘುರಾಮ ಭಾಗವತರು ಸಾಮಾನ್ಯ ವಿಷಾದದ ಛಾಯೆಯಲ್ಲಿ ಹಾಡುತ್ತಿದ್ದರು.

ಮಗನ ಹಾಡುವ ಶೈಲಿ ಅಲ್ಲಿಯೇ ಸಮೀಪ ಇದ್ದ ತಂದೆ, ಪ್ರಸಿದ್ಧ ಭಾಗವತ ಅಗರಿ ಶ್ರೀನಿವಾಸ ಭಾಗವತರಿಗೆ ಭಾರೀ ಸಿಟ್ಟನ್ನು ತರಿಸಿತಂತೆ.

"ಎಂಥದಯ್ಯ ನಿನ್ ಚಪ್ಪೆ ಹಾಡು. ಭೀಮನ ವಿಷಾದದಲ್ಲೂ ಒಂದಿಷ್ಟು ವೀರ ರಸ ಇರಬೇಕು. ಸಾಮಾನ್ಯರು ಅಳುವು ಬೇರೆ.. ಖಲಿ ಭೀಮನ ವಿಷಾದ ಬೇರೆ ಎಂಬ ಭಾವನೆ ಹಾಡಲ್ಲಿ ಬರಲಿ' ಎಂದು ಎಲ್ಲರ ಎದುರೇ ಮಗನಿಗೆ ಬೈದರಂತೆ. ಪ್ರತಿಯೊಂದು ಪಾತ್ರದ ಭಾವನೆಯನ್ನೂ ಭಾಗವತ ಮೊದಲು ಪದ್ಯದಲ್ಲಿ ಅಭಿವ್ಯಕ್ತಿಸಬೇಕು, ನಂತರ ಅದನ್ನು ಅರ್ಥ ರೂಪದಲ್ಲಿ ಪಾತ್ರಧಾರಿ ಮುಂದುವರಿಸಬೇಕು ಎಂಬ ತಂದೆಯ ತತ್ವವನ್ನು ಅಂದಿನಿಂದಲೇ ನಾನು ಕಲಿತೆ ಎನ್ನುತ್ತಾರೆ ರಘುರಾಮ ರಾವ್.

20 ವರ್ಷ ಹಿಂದೆ ನಿವೃತ್ತರಾಗಿ ಬಜಪೆ ಸಮೀಪ ಎಡಪದವಿನಲ್ಲಿ ಒಂದು ಅಂಗಡಿ ಹಾಕಿಕೊಂಡು ಅದರ ಗಲ್ಲೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತ ತಮ್ಮ ಜೀವನದ ಎರಡನೆ ಇನ್ನಿಂಗ್ಸ್ ಆಡುತ್ತಿರುವ ರಘುರಾಮ ರಾವ್ ತಾನು ಜೀವನದಲ್ಲಿ ಮೊಟ್ಟ ಮೊದಲು ಮಾಡಿದ ಭಾಗವತಿಕೆಯನ್ನು ಸ್ಮರಿಸಿದ್ದು ಹೀಗೆ..

ಅಂದಿನ ಕೃಷ್ಣ ಸಂಧಾನದ ವಿಶೇಷ ಎಂದರೆ ಅಪರೂಪಕ್ಕೆ ಅರ್ಥವನ್ನೂ ಹೇಳುತ್ತಿದ್ದ ಹಿರಿಯ ಅಗರಿ ಭಾಗವತರು ಅಂದು ಸ್ವತಃ ಭೀಮನ ಪಾತ್ರಧಾರಿಯಾಗಿದ್ದರು. ಜಾಗಟೆ ಹಿಡಿದು ಭಾಗವತಿಕೆ ಆರಂಭಿಸಿದ ಮಗನಿಗೆ ಅಲ್ಲೇ ಚುಚ್ಚಿ ತಿದ್ದಿದ್ದರು.

ಹೀಗೆ ಆರಂಭವಾಗುತ್ತದೆ ಅಗರಿ ರಘುರಾಮ ರಾಯರ ಯಕ್ಷಗಾನ ವಡನಾಟ. ನಂತರ ಸುಮಾರು 35 ವರ್ಷಗಳ ಕಾಲ ನಡೆಯುತ್ತದೆ. ಪ್ರಸಿದ್ಧ ಟೆಂಟ್ ಮೇಳಗಳಲ್ಲಿ ಒಂದಾದ ಸುರತ್ಕಲ್ ಮೇಳದ ಆರಂಭದಿಂದ ಕೊನೆಗೆ ಮೇಳ ಮುಚ್ಚುವ ತನಕವೂ ಅವರು ಇದ್ದು, ನಿವೃತ್ತಿ ನಂತರ ಮಕ್ಕಳನ್ನು ಸೇರಿಕೊಂಡು ಉದ್ಯಮದಲ್ಲಿ ತೊಡಗಿಕೊಂಡ ಕ್ರಾಂತಿಕಾರಿ ಆಲೋಚನೆಯ ಮನುಷ್ಯ.

ಯಕ್ಷಗಾನದೊಂದಿಗೆ ತೀವ್ರ ಒಡನಾಡಿ ಆಗಿದ್ದದ್ದಷ್ಟೇ ಅಲ್ಲ, ಮನೆತನದ ಕೊಡುಗೆಯಾದ ಅಗರೀ ಶೈಲಿಯನ್ನು ಸಾಗಿಸಿ ತಂದರೂ, ಇದೀಗ ಅದರಿಂದ ಸಂಪೂರ್ಣ ಆಚೆ ಬಂದಿರುವ ಬಗ್ಗೆ ಅವರಲ್ಲಿ ಸ್ವಲ್ಪವೂ ವಿಷಾದ ಕಾಣುವುದಿಲ್ಲ.

****************

ನೌಕರಿ ಬಿಟ್ಟು ಬಂದರು

ತಂದೆಯ ಪಡಿಯಚ್ಚಿನಂತೆ ಹಾಡುವುದನ್ನು ಕಲಿತರೂ, ಅಲೋಷಿಯಸ್ ಕಾಲೇಜಿನಲ್ಲಿ ಆಗಿನ ಕಾಲದಲ್ಲೇ ಎಸ್ಸೆಸೆಲ್ಸಿ ನಂತರ ಎಫ್ಎ ತನಕ ಓದಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಘುರಾಮ ರಾಯರನ್ನು ಮೇಳದವರು ವತ್ತಾಯ ಪೂರ್ವಕ ಕರೆದರು. ಆ ವರ್ಷ ಸುರತ್ಕಲ್ ಮೇಳಕ್ಕೆ ಭಾಗವತರೇ ಇಲ್ಲದ ಕಾರಣ ಬರುವಂತೆ ಕರೆ ಬಂದಿತು. ಹಾಗಂತ ಯಕ್ಷಗಾನ ತನ್ನನ್ನು ಪೂರ್ಣವಾಗಿ ಸಾಕೀತು ಎಂಬ ನಂಬುಗೆ ಬಾರದೆ ರಘುರಾಮ ರಾಯರು 6 ತಿಂಗಳು ಆರೋಗ್ಯ ಕಾರಣದ ರಜೆ ಹಾಕಿ ಒಂದು ತಿರುಗಾಟಕ್ಕೆ ಒಪ್ಪಿಕೊಂಡು ಮೇಳಕ್ಕೆ ಬಂದವರು. ನಂತರ ಮೇಳದವರು ಅವರನ್ನು ಬಿಡದ ಕಾರಣ ನೌಕರಿ ಬಿಟ್ಟು ಭಾಗವತಿಕೆಯನ್ನೇ ಉಪ ಜೀವನವಾಗಿ ಆಯ್ದುಕೊಂಡರು.

ಆರಂಭದಲ್ಲಿ ಪೆಟ್ರೊ ಮ್ಯಾಕ್ಸ್ ಲೈಟಿನಲ್ಲಿ, ಯಾವುದೇ ಮೈಕ್ ಇಲ್ಲದೆ ಇಡೀ ರಾತ್ರಿ ಒಬ್ಬರೇ ಭಾಗವತರು ಆಟಗಳನ್ನು ನಿವರ್ಹಿಸುತ್ತಿದ್ದರು. ತಿರುಗಾಟದ ಸಂದರ್ಭ ಭಾಗವತಿಕೆಯ ಜತೆಗೆ ನಿವಾರ್ಹಕನ ಕೆಲವು ಜವಾಬ್ದಾರಿಗಳೂ ತನಗೆ ಇಷ್ಟವಾಗಿತ್ತು. ಆಟ ಆರಂಭ ಆಗುವ ಮೊದಲು ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ಟಿಕಿಎಟ್ ಕೊಡುವುದು ಇವರ ಮುಖ್ಯ ಆಸಕ್ತಿಯಾಗಿತ್ತು. ಇಂಥ ಅನುಭವದ ಜತೆ ಆಡಳಿತದಲ್ಲಿನ ನಿಷ್ಠೆಯೂ ತನಗೆ ನಂತರ ಉದ್ಯಮ ತೂಗಿಸುವಾಗ ಅನುಕೂಲಕ್ಕೆ ಬಂತು ಎಂದು ಅವರು ಸ್ಮರಸಿಸುತ್ತಾರೆ.

****************

ತಡೆಯಾಜ್ಞೆಯಿಂದಾಗಿ ರದ್ದಾದ ಆಟ

ಟೆಂಟ್ ಮೇಳದಲ್ಲಿ ಜನರ ಆಕರ್ಷಣೆಗೆ ಪ್ರತೀ ವರ್ಷವೂ ಒಂದೊಂದು ಹೊಸ ಹೊಸ ಆಟವನ್ನು ಆಡಬೇಕಾಗಿತ್ತು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಶಸ್ವೀ ಆಗಿದ್ದ ಕಾಲ ಅದು. ಸುರತ್ಕಲ್ ಮೇಳದ ಯಜಮಾನ ಕಸ್ತೂರಿ ಪೈ ಅವರು ಭಾಗವತ ಅಗರಿ ಅವರಲ್ಲಿ ಕೇಳಿದಾಗ, ನಾವೂ ಆಡಿಸಬಹುದು ಎಂದು ಹೇಳಿದರು. ಪ್ರಸಿದ್ಧ ಕಲಾವಿದರಿರುವ ಸುರತ್ಕಲ್ ಮೇಳದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಆಡಲಾಗುವು ಎಂಬ ವಿಷಯ ಎಲ್ಲೆಡೆ ಪ್ರಚಾರ ಆಗುತ್ತಲೇ, ಆಗ ಧರ್ಮಸ್ಥಳ ಮೇಳದ ಮ್ಯಾನೇಜರ್ ಹಾಗೂ ಪ್ರಸಿದ್ಧ ಕಲಾವಿದ ಕುರಿಯ ವಿಠಲ ಶಾಸ್ತ್ರಿಗಳು ರಘುರಾಮ ರಾಯರನ್ನು ಭೇಟಿಯಾಗಿ "ನೋಡಿ ಅದು ನಮ್ಮ ಮೇಳದ ಆಟ. ನೀವು ಅದನ್ನು ಆಡುವುದಕ್ಕಾಗದು' ಎಂದು ಹೇಳಿದರಂತೆ. ಕಾಪಿ ರೈಟ್ ವಿಚಾರಗಳು ಆಗ ಪ್ರಚಲಿತ ಇರುವ ಕಾಲ ಅಲ್ಲದಿದ್ದರೂ, ಧರ್ಮಸ್ಥಳ ಮೇಳ ಹಾಗೂ ಸುರತ್ಕಲ್ ಮೇಳದ ನಡುವೆ ಪ್ರೇಕ್ಷಕರನ್ನು ಸೆಳೆಯುವ ವಿಚಾರದಲ್ಲಿ ತುರುಸಿನ ಸ್ಪರ್ಧೆ ಇರುವ ಕಾಲ ಅದು.ಕುರಿಯ ವಿಠಲ ಶಾಸ್ತ್ರಿಗಳ ತಾಕೀತನ್ನು ಯಜಮಾನರಲ್ಲಿ ಹೇಳುವಷ್ಟರಲ್ಲೆ ಎಲ್ಲೆಡೆ ಪ್ರಚಾರ ಆಗಿ ಬೆಳ್ಮಣ್ಣು ಮತ್ತಿತರ ಕಡೆಯಲ್ಲಿ ಆಟ ಆಡುವುದು ನಿಗದಿಯೂ ಆಗಿತ್ತು. ಅದಕ್ಕಾಗಿ ಮಂಗಳೂರಿನ ಆಗಿನ ಪ್ರಸಿದ್ಧ ವಕೀಲರೊಬ್ಬರಲ್ಲಿ ಕಸ್ತೂರಿ ಪೈಗಳು ಏನು ಮಾಡುವುದು ಎಂದು ಕೇಳಿದಾಗ, ಏನೂ ಆಗುವುದಿಲ್ಲ. ನಿಮ್ಮದು ರಿಜಿಸ್ಟರ್ಡ್ ಮೇಳ. ನೀವು ಆಡಿ ಎಂದು ಧೈರ್ಯ ಹೇಳಿದರಂತೆ.
ಕುರಿಯ ವಿಠಲ ಶಾಸ್ತ್ರಿ


ಅಂತೂ ಬೆಳ್ಮಣ್ಣಿನಲ್ಲಿ ಆಟಕ್ಕೆ ಸಿದ್ಧವಾಗಿ ಗಣಪತಿ ಪೂಜೆಗೆ ಸಜ್ಜಾಗುವ ಹೊತ್ತಿಗೆ ಟೆಂಟಿಗೆ ಪೊಲೀಸರು ಬಂದರು. ಅಲ್ಲದೆ ಎರಡು ವಾರದ ಅವಧಿಗೆ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಆಡದಂತೆ ಇರುವ ಜಿಲ್ಲಾಧಿಕಾರಿಯಿಂದ ತರಲಾದ ತಡೆಯಾಜ್ಞೆಯ ಪತ್ರವನ್ನೂ ಯಜಮಾನರಿಗೆ ಮತ್ತು ಭಾಗವತರಿಗೆ ವಿತರಿಸಲಾಯಿತು. ಅದಕ್ಕಾಗಿ ಅಂದು ನಿಗದಿಯಾಗಿದ್ದ ಆಟ ನಡಯಲಿಲ್ಲ. ಯಜಮಾನ ಕಸ್ತೂರಿ ಪೈ ಸುಮ್ಮನಾಗಲಿಲ್ಲ. ವಾಪಸ್ ಜಿಲ್ಲಾಧಿಕಾರಿಗೆ ನೊಟೀಸು ನೀಡಿ, ಆದೇಶದಂತೆ ನಮ್ಮ ಪ್ರದರ್ಶನಕ್ಕೆ ತಡ ಉಂಟು ಮಾಡಿದ ಜಿಲ್ಲಾಡಳಿತ ಮೇಳದ ಹದಿನೈದು ದಿನದ ಖರ್ಚನ್ನು ಭರಿಸಬೇಕು ಎಂದು ಕೋರ್ಟ್ನಲ್ಲಿ ವ್ಯಾಜ್ಯ ಹೂಡುತ್ತಾರೆ. ಇದರಿಂದ ಹೆದರಿದ ಜಿಲ್ಲಾಧಿಕಾರಿ ಧರ್ಮಸ್ಥಳದ ಹಿಂದಿನ ಹೆಗ್ಗಡೆಯವರು ಮತ್ತು ಸುರತ್ಕಲ್ ಮೇಳದ ಯಜಮಾನರ ನಡುವೆ ಸಂಧಾನ ಏರ್ಪಡಿಸುತ್ತಾರೆ. ಮೊದಲು ಹರಕೆ ಆಟವನ್ನು ಧರ್ಮಸ್ಥಳದಲ್ಲಿ ಆಡಿ, ನಂತರ ಬೇರೆಡೆ ಆಡಬೇಕು ಎಂಬ ಕಂಡೀಶನ್ ಆಧಾರದಲ್ಲಿ ಸುರತ್ಕಲ್ ಮೇಳಕ್ಕೆ ಆಟ ಆಟಡಲು ಹಸಿರು ನಿಶಾನೆ ಸಿಗುತ್ತದೆ.

ಆಟಕ್ಕೆ ಹೋದ ಸುರತ್ಕಲ್ ಮೇಳಕ್ಕೆ ಎಲ್ಲ ರೀತಿ ಉಚಿತ ವ್ಯವಸ್ಥೆ, ವೀಳ್ಯದ ದುಡ್ಡಿನೊಂದಿಗೆ ಭಾಗವತರು, ಯಜಮಾನರು ಮತ್ತು ಹಿರಿಯ ಕಲಾವಿದರಿಗೂ ಶಾಲು ಹೊದೆಸಿ ಹಿಂದಿನ ಹೆಗ್ಗಡೆಯವರು ಆಟ ಆಡಿಸಿ ಕಳುಹಿಸಿ ಕೊಡುವ ಮೂಲಕ ವಿವಾದ ಇತ್ಯರ್ಥ ಆದ ಘಟನೆ ಇನ್ನೂ ರಘುರಾಮ ರಾಯರ ಮನಸ್ಸಿನಲ್ಲಿ ಅಚ್ಚಾಗಿ ಇದೆ.

****************

ವೇದಿಕೆಯಲ್ಲಿ ಕುಸಿದ ರಾಮಯ್ಯ ರೈಗಳು

ಪ್ರಸಿದ್ಧ ಕಲಾವಿದ ಅಳಕೆ ರಾಮಯ್ಯ ರೈ ಇದ್ದಾರೆ ಎಂದರೆ, ಆಟಕ್ಕೆ ಜನರು ಆಕರ್ಷಿತರಾಗುತ್ತಿದ್ದ ಕಾಲ. ಅವರು ಮತ್ತು ಪುತ್ತೂರು ನಾರಾಯಣ ಹೆಗ್ಡೆ ಅವರನ್ನೊಳಗೊಂಡ ಸುರತ್ಕಲ್ ಮೇಳ ಒಮ್ಮೆ ಮುಂಬಯಿಗೆ ಹೋಗಿತ್ತು, ಭಾಗವತರಾಗಿ ಅಗರಿ ಸಾರಥ್ಯ.ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಮೊದಲು ಕರ್ಣ ಪರ್ವ. ನಂತರ ಗಧಾಯುದ್ಧ ಆಟ.

ಕರ್ಣ ಪರ್ವದಲ್ಲಿ ಶಲ್ಯನೊಂದಿಗಿನ ಸನ್ನಿವೇಶ ಚೆಂದ ಆಯಿತು. ನಂತರ ಅರ್ಜುನ ಕರ್ಣರ ಮುಖಾಮುಖಿಯಲ್ಲಿ ಅರ್ಧ ಭಾಗ ಕಳೆದು, ಕರ್ಣನ ರಥದ ಗಾಲಿ ಹೂತು ಹೋಗು ಹೊತ್ತಿಗೆ, ಅಭಿನಯಿಸುತ್ತಿದ್ದಾಗಲೇ ಒಮ್ಮೆ ಬಾಯಿಯನ್ನು ತೆರೆದ ರೈಗಳು ಮುಚ್ಚಲೇ ಇಲ್ಲ. ಕಳೆದ ಬಾಯಿಯನ್ನು ಮುಚ್ಚುವುದಕ್ಕೆ ಸಾಧ್ಯ ಆಗದೆ, ಅಲ್ಲೇ ಕುಸಿದು ಕುಳಿತರು*.

ಅಳಿಕೆ ರಾಮಯ್ಯ ರೈಗಳು
ದೊಡ್ಡ ಪ್ರೇಕ್ಷಕ ವರ್ಗ ಎದುರಿಗೆ ಇದ್ದು ಸಭೆಯಲ್ಲಿ ಗಲಿಬಿಲಿ ಉಂಟಾಗುವ ಮೊದಲು ಪರದೆ ಬಿಟ್ಟು ರೈ ಗಳನ್ನು ಒಳಕ್ಕೆ ಸಾಗಿಸಲಾಯಿತು.ಒಳಗೆ ಹೋದರೂ ರೈಗಳು ಸುಧಾರಿಸಿಕೊಳ್ಳಲೇ ಇಲ್ಲ. ಗಧಾ ಪರ್ವ ಆರಂಭಿಸೋಣ ಎಂದರೆ, ಪುತ್ತೂರು ನಾರಾಯಣ ಹೆಗ್ಡೆ ಇನ್ನೂ ಬಣ್ಣ ಹಚ್ಚಿರಲಿಲ್ಲ. ಪ್ರೇಕ್ಷಕರು ಎದ್ದು ಹೋಗುವ ಮೊದಲು ರಂಗಸ್ಥಳವನ್ನು ತುಂಬುವುದಕ್ಕೆ ಏನೋ ಒಂದು ಮಾಡಬೇಕಾಗಿತ್ತು.

ತಕ್ಷಣಕ್ಕೆ ಉತ್ತಮ ಮಾತುಗಾರನೊಬ್ಬನಿಗೆ ಸಂಜಯನ ಗವನ್ ಹಾಕಿಸಿ, ಕರ್ಣ ಪರ್ವದ ಅರ್ಜುನನಿಗೆ ಕರ್ಣಾವಸಾನದ ನಂತರ ಭೇಟಿಯಾಗುವ ಸಂಜಯನಲ್ಲಿ ನಡೆದ ಕಥೆಯನ್ನು ಹೇಳುವ ನೆಪದಲ್ಲಿ ಅರ್ಧ ತಾಸು ರಂಗಸ್ಥಳ ತುಂಬಿದ್ದಾಯಿತು. ಅಷ್ಟರಲ್ಲಿ ಸಜ್ಜಾಗಿದ್ದ ಗಧಾಯುದ್ಧ ಪಾತ್ರಧಾರಿಗಳನ್ನು ರಂಗಸ್ಥಳಕ್ಕೆ ಕರೆಸಿ ಪ್ರೇಕ್ಷಕರ ಎದುರು ಅಂದಿನ ಅಪಘಾತವನ್ನು ಮರೆ ಮಾಚಿದ ಸನ್ನಿವೇಶವನ್ನು ರಘುರಾಮ ರಾಯರು ಸ್ಮರಿಸುತ್ತಾರೆ.

ವಿಪರೀತ ನಿದ್ದೆಗೆಡುವುದರಿಂದ ಗಲ್ಲದ ಪಕ್ಕೆಲುವಿನ ನರಗಳು ದುರ್ಬಲ ಆಗಿ ಆ... ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಲಟ್ ಎಂದು ಕಿವಿ ಪಕ್ಕದ ಎಲುಬುಗಳು ಲಟ್ ಎಂದು ಮುರಿದ ಅನುಭವವೂ ಆಗುವುದಿದೆ.

*****************

ಕೌರವನನ್ನು ಸೋಲಿಸಿದ ಶೇಣಿ ಕೃಷ್ಣ

ಶೇಣಿ ಗೋಪಾಲ ಕೃಷ್ಣ ಭಟ್ಟರು ಸುರತ್ಕಲ್ ಮೇಳದಲ್ಲಿದ್ದ ಕಾಲ ಅದು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಇಟಗಿಯಲ್ಲಿ ಕೃಷ್ಣ ಸಂಧಾನ ಆಟವನ್ನು ಅಲ್ಲಿನ ಕಾಂಟ್ರಾಕ್ಟರ್ ಒಬ್ಬರು ಏರ್ಪಡಿಸಿದ್ದರು. ಪ್ರಸಿದ್ಧ ಸಂಸ್ಕೃತ ಪಂಡಿತ ಹಾಗೂ ವಾಗ್ಮಿ ಮತ್ತು ಹವ್ಯಾಸಿ ಅರ್ಥಧಾರಿ ಬುಚ್ಚನ್ ನಾರಾಯಣ ಶಾಸ್ತ್ರಿ ಅವರ ಬೆಂಬಲಿಗರು ಏರ್ಪಡಿಸಿದ್ದ ಆಟ. ಬೆಂಬಲಿಗ ಬೇಡಿಕೆಯಂತೆ ಶಾಸ್ತ್ರಿ ಅವರ ಕೌರವ ಮತ್ತು ಶೇಣಿ ಅವರ ಕೃಷ್ಣ. ಪ್ರೇಕ್ಷಕರ ಬೇಡಿಕೆಯಂತೆ ಬಡಗಿನ ಪ್ರಸಂಗ ಪಠ್ಯ ಹಾಗೂ ಹಿಮ್ಮೇಳವನ್ನೂ ಇಡಲಾಗಿತ್ತು. ಅಗರಿಯವರು ಪ್ರಧಾನ ಭಾಗವತನಾದರೂ ಕಾಂಟ್ರಾಕ್ಟರ್ ಕೋರಿಕೆಯಂತೆ ಚೌಕಿಯಲ್ಲಿ ಕುಳಿತಿದ್ದರು.

ಶೇಣಿ ಗೋಪಾಲಕೃಷ್ಣ ಭಟ್
ಬುಚ್ಚನ್ ಶಾಸ್ತ್ರಿಗಳು ಪ್ರಖಾಂಡ ಪಂಡಿತರಾದರೂ ರಂಗದ ಅನುಭವ ಕಡಿಮೆ. ಕೃಷ ಕಾಯರಾದ ಶಾಸ್ತ್ರಿಗಳನ್ನು ಕೌರವನ ಹದಕ್ಕೆ ತರಲು ಗೋಣಿ ಚೀಲ ಸುತ್ತಿ ಅವರ ವೇಷ ಸಿದ್ಧಪಡಿಸಿ ರಂಗಕ್ಕೆ ಕಳುಹಿಸಲಾಯಿತು. ತಮ್ಮ ಪಾಂಡಿತ್ಯಕ್ಕನುಗುಣ ಶಾಸ್ತ್ರಿಗಳು ಕೌರವನ ಪೀಠಿಕೆಯನ್ನೇ ಅರ್ಧ ತಾಸು ಹೇಳಿ ಚಪ್ಪಾಳೆ ಗಿಟ್ಟಿಸಿದ್ದರಲ್ಲದೆ,ಚೌಕಿ ಮನೆಯಲ್ಲೂ ಅವರ ಸಾಕಷ್ಟು ಬೆಂಬಲಿಗರು ಅವರ ಸಹಾಯಕ್ಕೆ ಇದ್ದರು.ಇದೆಲ್ಲ ನೋಡಿದರೆ, ಅವರ ಎದುರು ಶೇಣಿಯವರ ಕೃಷ್ಣ ಸಪ್ಪೇ ಆದೀತು ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ನಂತರ ಆದದ್ದೇ ಬೇರೆ. ವಿರೋಧಿ ಅರ್ಥದಾರಿಯನ್ನು ಖಂಡಿಸುವಲ್ಲಿ ಪರಿಣತಿ ಹೊಂದಿದ್ದ ಶೇಣಿ, ಪ್ರತಿಯೊಂದು ಮಾತಿನಲ್ಲೂ ಕೌರವನನ್ನು ಕಟ್ಟಿ ಹಾಕಿ, ಮುಖಭಂಗ ಮಾಡಿದರು. ಅದೇ ಸಂದರ್ಭ ಶಾಸ್ತ್ರಿಗಳ ಸೈಜ್ ಹಿಗ್ಗಿಸಲು ತುಂಬಲಾಗಿದ್ದ ಗೋಣಿ ಚೀಲವೂ ಬಿಚ್ಚಿ ಹೋದ ಕಾರಣ ಅವರು ಸಿಂಹಾಸನಕ್ಕೇ ಸೀಮಿತರಾಗಿ, ಗಾಢ ಗರ್ವದಲಿ ಕುಳಿತಿರುವ ಈ ಭೂವರನು ಎಂಬ ಪದ್ಯಕ್ಕಂತೂ ಕೌರವನನ್ನು ಕೃಷ್ಣ ಹನನ ಮಾಡುವಷ್ಟು ತೊಳೆದ ಕಾರಣ, ಆಟ ಅರ್ಧಮರ್ಧದಲ್ಲೇ ಮುಗಿಸಬೇಕಾಯಿತು. ಶೇಣಿಯಿಂದ ಅವಮಾನಿತರಾಗಿ ಚೌಕಿಗೆ ಹೋದರೆ ಶಾಸ್ತ್ರಿಗಳ ವೇಷ ಕಟ್ಟಿ ಕೊಟ್ಟವರೂ ಅಲ್ಲಿ ಇರಲಿಲ್ಲ.ಇಂಥದ್ದೊಂದು ವಿಚಿತ್ರ ಆಟ ಮತ್ತೆಲ್ಲಿಯೂ ಕಾಣಲಿಲ್ಲ ಎಂದು ಅಗರಿ ಭಾಗವತರು ಸ್ಮರಿಸುತ್ತಾರೆ.

****************

ಬದಲಾದ ಅಗರಿ ಬ್ರಾಂಡ್

ಇಷ್ಟೊಂದು ಹಿನ್ನೆಲೆ ಇರುವ ಅಗರಿ ರಘುರಾಮ ಭಾಗವತರು ಇತ್ತೀಚಿನ ದಶಕಗಳಲ್ಲಿ ಯಕ್ಷಗಾನದಿಂದ ದೂರ ಆಗಿದ್ದಾರೆ. ವರ್ಷಕ್ಕೊಮ್ಮೆ ಅಗರಿ ಪ್ರಶಸ್ತಿ ಸಂದರ್ಭ ಹಾಗೂ ಸುರತ್ಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ದಸರೆ ಸಂದರ್ಭ ಕೆಲವು ತಾಸಿಗಷ್ಟೆ ಅವರ ಯಕ್ಷಗಾನ ಸೀಮಿತ ಆಗಿದೆ. ಅವರ ಪರಂಪರೆಯ ಹಾಡುಗಳ ಧ್ವನಿ ಮುದ್ರಿಸಿ ಇಡುವುದರಲ್ಲೂ ಅವರಿಗೆ ನಂಬಿಕೆ ಇಲ್ಲ.ಶೌಚಾಲಯದ ಕಟ್ಟೆಯಲ್ಲೂ ಎಲ್ಲೋ ಒಗೆಯುವ ಭಾಗ್ಯಕ್ಕೆ ತಮ್ಮ ಪರಂಪರೆ ಹಾಡನ್ನು ಧ್ವನಿ ಮುದ್ರಣ ಮಾಡಿ ಇಡಬೇಕೆ ಎಂದು ಅವರು ಕೇಳುತ್ತಾರೆ.

ನಿಮ್ಮ ಮುಂದೆ ನಿಮ್ಮ ಪರಂಪರೆಯ ಬಗ್ಗೆ ಏನು ಹೇಳುತ್ತೀರಿ ಎಂದರೆ, ಯಾರಿಗೆ ಬೇಕಯ್ಯ ಪರಂಪರೆ ಎನ್ನುತ್ತಾರೆ. ಪರಂಪರೆ ಎಂದರೆ ಏನು ? ನಮ್ಮ ತಂದೆಯ ಹಿಂದೆ ಇದು ಯಾರಲ್ಲಿ ಇತ್ತು. ಯಕ್ಷಗಾನ ಪರಂಪರೆ, ಅಲ್ಲಿನ ದೈನೇಸಿ ಬದುಕು ನಮಗಷ್ಟೇ ಸಾಕು. ನಮ್ಮ ಪರಂಪರೆಯವರಿಗೆ ಬೇಡ ಎಂದು ಖಡಕ್ ಆಗಿ ಹೇಳುತ್ತಾರೆ.

ಅಗರಿ ಪರಂಪರೆ ಅಥವಾ ಬ್ರಾಂಡ್ - ರಘುರಾಮ ಭಾಗವತರ ಕಾಲದಲ್ಲೇ ಇಲೆಕ್ಟ್ರಾನಿಕ್ ಮಳಿಗೆಯ ರೂಪದಲ್ಲಿ ಮರು ಹುಟ್ಟು ಪಡೆದಿದೆ.ರಘುರಾಮ ರಾಯರ ನಿಷ್ಠುರತೆ ಹಾಗೂ ವ್ಯಾವಹಾರಿಕ ಶಿಸ್ತ್ತ, ಭಾಗವತಿಕೆಯ ನಾಯಕತ್ವ ಎಲ್ಲವೂ ಮಳಿಗೆಯ ರೂಪದಲ್ಲಿ ಸಾರ್ವಜನಿಕರೆದುರು ಜೀವಂತವಾಗಿ ಉಳಿದಿದೆ ಎನ್ನಿಸುತ್ತದೆ.



ಕೃಪೆ : http://aniketana-hargi.blogspot.in


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ